ದೇಶವನ್ನೇ ಬೆರಗುಗೊಳಿಸಿದ ಮದ್ಯಪ್ರದೇಶದ ಸೆಷನ್ಸ ನ್ಯಾಲಾಯದ ತೀರ್ಪು – ವಂಚಕನಿಗೆ ಬರೋಬ್ಬರಿ 170 ವರ್ಷಗಳ ಜೈಲು ಶಿಕ್ಷೆ.

MP court awards 170-year imprisonment to man who cheated 34 people.

ಭಾರತದ ಮಧ್ಯಪ್ರದೇಶದ ಸೆಷನ್ಸ್ ನ್ಯಾಯಾಲಯವು 55 ವರ್ಷದ ನಾಸಿರ್ ಮೊಹಮ್ಮದ್ ಎಂಬ ವ್ಯಕ್ತಿಗೆ 34 ಜನರಿಗೆ 72 ಲಕ್ಷ ರೂ ವಂಚಿಸಿದ ಆರೋಪದಲ್ಲಿ 170 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಿಯು ಕಾಂಬೋಡಿಯಾ, ವಿಯೆಟ್ನಾಂ ಮತ್ತು ದುಬೈನಲ್ಲಿ ಗಾರ್ಮೆಂಟ್ ವ್ಯಾಪಾರವನ್ನು ಹೊಂದಿರುವುದಾಗಿ ಸುಳ್ಳು ಹೇಳಿಕೊಂಡು  ಮದ್ಯಪ್ರದೇಶದ  ಸಾಗರ ಜಿಲ್ಲೆಯ ಭೈಂಸಾ ಮತ್ತು ಸದರ್ ಗ್ರಾಮಗಳ ನಿವಾಸಿಗಳನ್ನು ವಂಚಿಸಿದ್ದನು. ಕಾಂಬೋಡಿಯಾ, ವಿಯೆಟ್ನಾಂ ಮತ್ತು ದುಬೈನಲ್ಲಿ ಕಾರ್ಖಾನೆಯಲ್ಲಿ ಹೂಡಿಕೆ ಮಾಡಲು ಜನರನ್ನು ಮನವೊಲಿಸಿ ಮತ್ತು ನಂತರ ಅವರ ಹಣದೊಂದಿಗೆ ತಲೆ ಮರೆಸಿಕೊಂಡಿದ್ದನು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಅಡಿಯಲ್ಲಿ (ವಂಚನೆ ) ಮತ್ತು IPC ಸೆಕ್ಷನ್ 193 (ಸುಳ್ಳು ಸಾಕ್ಷ್ಯಕ್ಕಾಗಿ ಶಿಕ್ಷೆ) ಅಡಿಯಲ್ಲಿ ನಾಸಿರ್ ಮೊಹಮ್ಮದ್ ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಪು ನೀಡಿದೆ. ಎರಡೂ ಸೆಕ್ಷನ್‌ಗಳಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದಾಗ್ಯೂ, 34 ವ್ಯಕ್ತಿಗಳು ಪ್ರತ್ಯೇಕವಾಗಿ ವಂಚನೆಗೊಳಗಾಗಿರುವುದನ್ನು ಪರಿಗಣಿಸಿ, ಪ್ರತಿ ಮೋಸಹೋದ ವ್ಯಕ್ತಿಯ ಪರವಾಗಿ ಪ್ರತ್ಯೇಕ ಶಿಕ್ಷೆಯನ್ನು ವಿಧಿಸಲು ನ್ಯಾಯಾಧೀಶರು ನಿರ್ಧರಿಸಿದರು. ಪ್ರತಿ ವಂಚನೆಯ ಶಿಕ್ಷೆಗೆ 5 ವರ್ಷದಂತೆ ಎಣಿಕೆ ಮಾಡಿಒಟ್ಟು 170 ವರ್ಷಗಳ ಕಠಿಣ ಸೆರೆವಾಸವನ್ನು ವಿಧಿಸಲಾಯಿತು.

ಅಪರಾಧಿ ಠೇವಣಿ ಇಟ್ಟಿರುವ ದಂಡದ ಮೊತ್ತದಿಂದ ಪ್ರತಿ ಸಂತ್ರಸ್ತರಿಗೆ 10,000 ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ವಂಚನೆಗಾಗಿ ಮಧ್ಯಪ್ರದೇಶದ ನ್ಯಾಯಾಲಯವು ಸತತ ಜೈಲು ಶಿಕ್ಷೆಯನ್ನು ವಿಧಿಸಿದ ಮೊದಲ ಪ್ರಕರಣವೇನು ಅಲ್ಲ. ಮಾರ್ಚ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಚಿಟ್ ಫಂಡ್ ಕಂಪನಿಯ ನಿರ್ದೇಶಕರಿಗೆ 20 ರಾಜ್ಯಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ 4,000 ಕೋಟಿ ರೂ ವಂಚನೆಗಾಗಿ 250 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಅಪರಾಧಿ ನಾಸಿರ್ ಮೊಹಮ್ಮದ್ ತನ್ನ ವ್ಯವಹಾರದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾನೆ ಮತ್ತು ತನ್ನ ಗುರುತಿನ ಬಗ್ಗೆ ಸುಳ್ಳು ಹೇಳಿದ್ದಾನೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಪ್ರಸ್ತುತಪಡಿಸಿತು. ಹಾಗೆಯೇ ಸಂತ್ರಸ್ತರ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿ ಅದನ್ನು ಹಿಂತಿರುಗಿಸುವಲ್ಲಿ ಆರೋಪಿ ವಿಪಲನಾದನು, ಇದು ಆರೋಪಿಯ ವಿರುದ್ಧ ಅನುಮಾನಗಳಿಗೆ ಮತ್ತು ನಂತರದ ಆರೋಪಗಳಿಗೆ ಕಾರಣವಾಯಿತು. ಸುಳ್ಳು ಪ್ರಚೋದನೆ ಮತ್ತು ಹೇಳಿಕೆಗಳ ಮೂಲಕ ಜಾಣತನದಿಂದ ಸಂತ್ರಸ್ತರನ್ನು ವಂಚಿಸಿ ಅವರಿಂದ ಲಕ್ಷಗಟ್ಟಲೆ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ಶಿಕ್ಷೆಯ ಸಮಯದಲ್ಲಿ, ನಾಸಿರ್ ಮೊಹಮ್ಮದ್ ಅವರ ವಕೀಲರು ನಾಸಿರ್ ಅವರು ಯಾವುದೆ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಮತ್ತು ಈ ಮೊದಲು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲವೆಂದು ವಾದ ಮಂಡಿಸಿದರು. ಆದಾಗ್ಯೂ, ನ್ಯಾಯಾಲಯವು ಈ ಮನವಿಯನ್ನು ಪರಿಗಣಿಸಲಿಲ್ಲ ಮತ್ತು ಪ್ರಸ್ತುತ ಮಾಡಿದ ಅಪರಾಧಗಳು ಸಾಭಿತಾದ ಆಧಾರದ ಮೇಲೆ ಗರಿಷ್ಠ ಶಿಕ್ಷೆಯನ್ನು ನೀಡಿತು.

Leave a Comment